ಭಾರತದ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿರುವ ಅತ್ಯಂತ ಪ್ರಸಿದ್ಧ ಸಸ್ಯೋದ್ಯಾನಗಳಲ್ಲೊಂದು. ಇದನ್ನು ಕರ್ನಾಟಕದ ಶಿರಾದ ಮೊಗಲ್ ಉದ್ಯಾನವನದ ಮಾದರಿಯಲ್ಲಿ ಹೈದರ್ ಅಲಿ ಸಣ್ಣ ಪ್ರಮಾಣದಲ್ಲಿ ಆರಂಭಿಸಿದ. ಇವನ ಮಗ ಟಿಪ್ಪುಸುಲ್ತಾನ ಇದನ್ನು ಅಭಿವೃದ್ಧಿಪಡಿಸಿದ. ಕಾಬೂಲ್, ಪರ್ಷಿಯ, ಮಾರಿಷಸ್ ಹಾಗೂ ಟರ್ಕಿಗಳಿಂದ ಹಲವು ಬಗೆಯ ಬೀಜ, ಸಸ್ಯಗಳನ್ನು ತರಿಸಿ ನೆಡಿಸಿದ. ತರುವಾಯ ಮಾರ್ಕ್ ಕಬ್ಬನ್ ಇದರ ಉಸ್ತುವಾರಿ ವಹಿಸಿ(1856), ಕ್ಲೆಗ್‍ಹಾರ್ನ್‍ನಿಂದ ಸಸ್ಯೋದ್ಯಾನವನ್ನಾಗಿ ರೂಪಿಸಿದ. ಪ್ರಸ್ತುತ ಇದು ಪ್ರಧಾನವಾಗಿ ಆಲಂಕಾರಿಕ ಸಸ್ಯ ಸಂಬಂಧೀ ಸಂಶೋಧನೆ, ವಿಸ್ತರಣೆ ಹಾಗೂ ಅಭಿವೃದ್ಧಿ ಚಟುವಟಿಕೆಗಳ ಕೇಂದ್ರವಾಗಿದೆ.

ಲಾಲ್‍ಬಾಗ್ ಇದರ ಮೂಲ ಹೆಸರಾಗಿರಲಿಲ್ಲ. 1856ರವರೆಗೆ ಇದಕ್ಕೆ ಈ ಹೆಸರಿದ್ದ ಬಗ್ಗೆ ದಾಖಲೆಗಳಿಲ್ಲ. ಮೊದಲು ಇದನ್ನು ಮಾವಿನ ತೋಪು ಮತ್ತು ಸೈಪ್ರಸ್ ಗಾರ್ಡನ್ ಎಂದು ಕರೆಯುತ್ತಿದ್ದರು. ಶ್ರೀರಂಗಪಟ್ಟಣದಲ್ಲಿದ್ದ ಲಾಲ್‍ಬಾಗ್ ಉದ್ಯಾನವನ್ನು ನೋಡಿದ ಜನ ಇದನ್ನೂ ಅದೇ ಹೆಸರಿನಿಂದ ಕರೆಯಲಾರಂಭಿಸಿದರು. ಆ ಉದ್ಯಾನವನ್ನು ಹೈದರ್ ಹಾಗೂ ಟಿಪ್ಪುಸುಲ್ತಾನರೇ ಅಭಿವೃದ್ಧಿಪಡಿಸಿದ್ದರು. ಅಲ್ಲಿ ಹೈದರ್ ಹಾಗೂ ಟಿಪ್ಪುಸುಲ್ತಾನರ ಗೋರಿಗಳಿರುವ ಗುಂಬಜ್ ಲಾಲ್‍ಬಾಗ್‍ನ ಮಧ್ಯದಲ್ಲಿ ಸ್ಥಾಪಿತವಾಗಿತ್ತು.

ಟಿಪ್ಪು ಸುಲ್ತಾನನ ಮರಣಾನಂತರ ಈಸ್ಟ್ ಇಂಡಿಯ ಕಂಪನಿ ಲಾಲ್‍ಬಾಗನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಮೇಜರ್ ವಾ ಇಲ್ಲಿ ವಿದೇಶೀ ಸಸ್ಯ, ತರಕಾರಿ, ಆಕರ್ಷಕ ಸಸ್ಯಗಳನ್ನೂ ಹಣ್ಣಿನ ಗಿಡಗಳನ್ನೂ ನೆಡಿಸಿದ. ತರುವಾಯ ಇದು ಮೈಸೂರಿನ ಮುಖ್ಯ ಕಮಿಷನರ್‍ನ ಸುಪರ್ದಿಗೆ ಬಂದಿತು(1831). 1836ರಲ್ಲಿ ಇದನ್ನು ಕೃಷಿ-ತೋಟಗಾರಿಕೆ ಸಂಸ್ಥೆಗೆ ವಹಿಸಲಾಯಿತು. 1856ರಲ್ಲಿ ಇದು ಸರ್ಕಾರಿ ಸಸ್ಯೋದ್ಯಾನವಾಗಿ ಸರ್ಕಾರದ ಆಡಳಿತಕ್ಕೊಳಪಟ್ಟಿತು. 1881ರಲ್ಲಿ ಇದು ಮತ್ತೆ ಮೈಸೂರು ಅರಸರ ಒಡೆತನಕ್ಕೆ ಬಂದಿತು. ಮೊದಲು 40 ಎಕರೆಗಳಷ್ಟಿದ್ದ ಇದರ ವ್ಯಾಪ್ತಿ ಎರಡರಷ್ಟಾಯಿತು. ಉದ್ಯಾನದ ಹರವು ವಿಸ್ತಾರವಾಗುತ್ತ ಬಂದು ಈಗ 120 ಎಕರೆಗಳಷ್ಟು ವಿಶಾಲವಾಗಿದೆ.

ಹೈದರ್ ಅಲಿಯ ಕಾಲದಲ್ಲಿ ಮಾವು, ಬಾಳೆ, ದಾಳಿಂಬೆಗಳನ್ನು ಇಲ್ಲಿ ಕೃಷಿಮಾಡುತ್ತಿದ್ದರು. ಟಿಪ್ಪು ಕಾಲದಲ್ಲಿ ಸೈಪ್ರಸ್, ತೂಜ, ಜುನಿಪರ್, ದ್ರಾಕ್ಷಿ, ಸೀಬೆ, ಸ್ಟ್ರಾಬೆರಿ ಮೊದಲಾದುವನ್ನು ಬೆಳೆಯಲಾಯಿತು. ಆದರೆ ಈ ಉದ್ಯಾನಕ್ಕೆ ಸಾರ್ವಜನಿಕರಿಗೆ ಪ್ರವೇಶವಿರಲಿಲ್ಲ. 1794ರಲ್ಲಿ ಟಿಪ್ಪು ಬೆಂಗಳೂರನ್ನು ಬ್ರಿಟಿಷರಿಗೆ ನೀಡಬೇಕಾದಾಗ ಇಲ್ಲಿನ ಸಸ್ಯರಾಶಿ ಹೆಚ್ಚು ಕಡಮೆ ನಾಶವಾಗಿತ್ತು. ಬ್ರಿಟಿಷ್ ಅಧಿಕಾರಿ ವಾ ಈ ಸಸ್ಯರಾಶಿಗೆ ಪುನರುಜ್ಜೀವನ ನೀಡಿದ. ಜೊತೆಗೆ ಓಕ್, ಎಲ್ಮ್, ಸಿಡರ್, ಪೈನ್, ಗುಲಾಬಿ, ಮ್ಯಾಗ್ನೋಲಿಯ ಮುಂತಾದುವನ್ನು ನೆಡಿಸಿದ. 1858ರಲ್ಲಿ ಅಧೀಕ್ಷಕನಾಗಿ ನೇಮಕಗೊಂಡ ವಿಲಿಯಮ್ ನ್ಯೂ ಎಂಬಾತ ಸಿಂಕೋನ, ಕಾಫಿ, ಟೀ, ಅನಾನಸ್, ಪಾಮ್, ಸಪೋಟ, ಸೀಬೆ, ದ್ರಾಕ್ಷಿ, ಮುಂತಾದ ವಾಣಿಜ್ಯ ಸಸ್ಯಗಳಲ್ಲದೆ ಅಜೇಲಿಯ, ರೋಡೋಡೆಂಡ್ರನ್, ಮ್ಯಾಗ್ನೋಲಿಯ, ಕ್ರೋಕಸ್ ಮೊದಲಾದ ಹೂ ಗಿಡಗಳನ್ನು ನೆಡಿಸಿದ್ದ. ಇವುಗಳೊಂದಿಗೆ ಯೂಕಲಿಪ್ಟಸ್, ಕ್ಯಾಸೂರೈನ, ಸಿಲ್ವರ್ ಓಕ್ ಮೊದಲಾದ ಮರಗಳನ್ನೂ ನೆಡಿಸಿದ.

ಅನಂತರದಲ್ಲಿ ಅಧೀಕ್ಷಕನಾದ ಜಾನ್ ಕೆಮರಾನ್‍ನ ಅವಧಿ ಲಾಲ್‍ಬಾಗಿನ ಸ್ವರ್ಣಯುಗವೆಂದು ಹೆಸರಾಗಿದೆ. ಈತ ಹೂ ಸಸ್ಯಗಳೊಂದಿಗೆ ಮರ, ಔಷಧೀಯ ಸಸ್ಯ, ಸಾಂಬಾರ ಸಸ್ಯಗಳನ್ನು ನೆಡಿಸಿದನಲ್ಲದೆ 17 ಬಗೆಯ ಸೇಬಿನ ಗಿಡಗಳನ್ನು ಹೊರಗಿನಿಂದ ತರಿಸಿದ. ಇವುಗಳಲ್ಲಿ ರೋಮ್ ಬ್ಯೂಟಿ ಆ್ಯಪಲ್ ಮುಖ್ಯವಾದುದು. ಕೋಸು, ಹೂಕೋಸು, ಕ್ಯಾರೆಟ್, ಮೂಲಂಗಿ, ಸ್ಪಿನ್ಯಾಕ್ ಮುಂತಾದ ತರಕಾರಿಗಳನ್ನು ಇಲ್ಲಿ ಬೆಳೆಯಲಾಗುತ್ತಿತ್ತು.

ಸಸ್ಯ ಸಂರಕ್ಷಣೆಗೆ ಗಾಜಿನಮನೆ ಅಗತ್ಯವೆಂದರಿತ ಕೆಮರಾನ್ ಅಗತ್ಯ ವಸ್ತುಗಳನ್ನು ಇಂಗ್ಲೆಂಡಿನಿಂದ ತರಿಸಿಕೊಂಡು ಕೇವಲ 12 ಗಂಟೆಗಳ ಅವಧಿಯಲ್ಲಿ ಗ್ಲಾಸ್‍ಹೌಸ್ ಸ್ಥಾಪಿಸಿದ(1888). ತರುವಾಯ ಇಲ್ಲಿ ವರ್ಷಕ್ಕೊಮ್ಮೆ ಪುಷ್ಪ ಪ್ರದರ್ಶನವೂ ಆರಂಭವಾಯಿತು. ಜಿ.ಎಚ್.ಕ್ರಂಬೀಗಲ್‍ನ ಅವಧಿಯಲ್ಲಿ ಅಮೂಲ್ಯ ಕೆಲಸಗಳು ನಡೆದವು. ಭೋಜಪತ್ರ, ಆಲಿವ್, ಹೀಮಟಾಕ್ಸಿಲೋನ್, ಗಂಧಮೆಣಸು ಮೊದಲಾದ ಅಸಂಖ್ಯ ಗಿಡ-ಮರಗಳನ್ನು ಇಲ್ಲಿ ನೆಡಲಾಯಿತು.

ಲಂಡನ್ನಿನ ಕ್ರಿಸ್ಟಲ್ ಪ್ಯಾಲೆಸ್(1851)ಗೂ ಗಾಜಿನಮನೆಗೂ ಹೋಲಿಕೆ ಇದೆ ಎಂದು ಹೇಳಲಾಗುತ್ತದೆ. ಗಾಜಿನ ಮನೆಯನ್ನು ಕಚೇರಿ, ಗ್ರಂಥಾಲಯ ಹಾಗೂ ಸಸ್ಯ ಸಂರಕ್ಷಣೆಗಾಗಿ ಬಳಸುವ ಉದ್ದೇಶ ಮೊದಲು ಇತ್ತಾದರೂ ತರುವಾಯ ಪ್ರದರ್ಶನಕ್ಕೆ ಮಾತ್ರ ಸೀಮಿತಗೊಳಿಸಲಾಯಿತು. ಇದಕ್ಕೆ ವೇಲ್ಸ್ ರಾಜಕುಮಾರ ಆಲ್ಬರ್ಟ್ ವಿಕ್ಟರ್ ಶಂಕುಸ್ಥಾಪನೆ ಮಾಡಿದ್ದ ಕಾರಣ ಇದನ್ನು ‘ಆಲ್ಬರ್ಟ್ ವಿಕ್ಟರ್ ಸಂರಕ್ಷಣಾಲಯ’ವೆಂದೂ ಕರೆಯಲಾಗುತ್ತದೆ.

ಇಲ್ಲಿ ಅತ್ಯಂತ ಪ್ರಾಚೀನ ಶಿಲಾವರ್ಗಕ್ಕೆ ಸೇರಿದ ನೈಸ್ ಶಿಲೆಯ ಬಂಡೆಯ ಮೇಲೆ ಬೆಂಗಳೂರು ನಿರ್ಮಾತೃ ಕೆಂಪೇಗೌಡ ನಿರ್ಮಿಸಿದ ಅಪರೂಪದ ಗೋಪುರವೂ ಇದೆ. ಆತ ಬೆಂಗಳೂರಿನ ಸುತ್ತ ನಾಲ್ಕು ದಿಕ್ಕಿನಲ್ಲಿ ಸ್ಥಾಪಿಸಿದ ಗೋಪುರಗಳಲ್ಲಿ ಇದೂ ಒಂದು. ಎಂ.ಎಚ್. ಮರೀಗೌಡ ಎಂಬವರ ಆಡಳಿತ ಅವಧಿಯಲ್ಲಿ ಈ ಸಸ್ಯೋದ್ಯಾನ ಇನ್ನೂ ಹೆಚ್ಚಿನ ಚೆಲುವನ್ನೂ ಸುರಕ್ಷತೆಯನ್ನೂ ಪಡೆದುಕೊಂಡಿತು.	ಆನೆಹುಣಿಸೆ (ಬಾವೊಬಾಬ್), ನೊಬೆಲ್ ಆಮ್‍ಹಸ್ರ್ಟಿಯ, ಬ್ರೌನಿಯ ಮೊದಲಾದ ಅಪರೂಪದ ಮರಗಳು ಲಾಲ್‍ಬಾಗ್‍ನಲ್ಲಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ